ನಮ್ಮ ಬಗ್ಗೆ

 

ತುಮಕೂರು ಜಿಲ್ಲೆ ಪ್ರಾಕೃತಿಕವಾಗಿ ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತದಲ್ಲಿಯೇ ತನ್ನದೇ ಆದ ಚಾಪುಮೂಡಿಸಿದ ಜಿಲ್ಲೆ. ಸಿದ್ಧಗಂಗಾ ಮಠ, ದೇವರಾಯನದುರ್ಗದ ಯೋಗ ಹಾಗೂ ಭೋಗ ನರಸಿಂಹ, ಯಡಿಯೂರು ಸಿದ್ಧಲಿಂಗೇಶ್ವರ, ಗುಬ್ಬಿ ಗೋಸಲ ಚನ್ನಬಸವೇಶ್ವರ, ನೊಣವಿನಕೆರೆಯ ಕಲ್ಮಠ ಸೇರಿದಂತೆ ಅನೇಕ ದೇವಾಲಯಗಳು ಈ ಜಿಲ್ಲೆಯಲ್ಲಿದ್ದು ದೇಶದ ದೈವಿಕ ಪರಂಪರೆಗೆ ಸಾಕಷ್ಟು ಕೊಡುಗೆ ನೀಡಿದೆ. ತುಮಕೂರಿನ ಪುಣ್ಯಕ್ಷೇತ್ರಗಳಿಗೆ ನೂತನ ಕೊಡುಗೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನಿಂದ ಕೇವಲ ೫ ಕಿ.ಮೀ ದೂರದಲ್ಲಿರುವ ಶ್ರೀಕ್ಷೇತ್ರವೆಂದೇ ಪ್ರಸಿದ್ಧಿಯಾಗಿರುವ ಗೊಟ್ಟೀಕೆರೆಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯ.

ದೇವಾಲಯ ನಿರ್ಮಾಣ

ಗೊಟ್ಟೀಕೆರೆ ಗ್ರಾಮದ ಶ್ರೀಮತಿ ಪುಟ್ಟಮ್ಮ ಜವರೇಗೌಡ (ಪಟೇಲ್‌ ಮಾಯಣ್ಣಗೌಡರ ಸಹೋದರಿ) ರವರಪುತ್ರರಾದ ಅಮೇರಿಕ ವಾಸಿಗಳಾದ ಶ್ರೀ ಜೀ.ಗಿರಿಯಪ್ಪ, ಶ್ರೀ ಜೀ  ರಾಮಕೃಷ್ಣ , ಡಾ ॥ಶ್ರೀ ಜೀ. ನಾರಾಯಣಸ್ವಾಮಿರವರ ದೈವ ಕೊಡುಗೆಯೇ ಈ ದೇವಾಲಯ.

ತನ್ನ ತಾಯಿ ಪುಟ್ಟಮ್ಮಜವರೇಗೌಡರು ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮಕ್ಕಳಿಗೆ ತನ್ನ ಹುಟ್ಟೂರಾದ ಗೊಟ್ಟೀಕೆರೆಯಲ್ಲಿ ರಾಮಮಂದಿರ ಕಟ್ಟಿಸಿ, ಸದಾ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗ್ರಾಮ ಮಿಂದೇಳುವಂತೆ ಮಾಡಿ. ಗ್ರಾಮಕ್ಕೆ ರಾಮನ ಅನುಗ್ರಹದ ಜೊತೆಗೆ ಸುತ್ತಮುತ್ತಲಿನ ಜನರ ಕಲ್ಯಾಣವಾಗಲಿ ಎನ್ನುವ ಆಸೆ ವ್ಯಕ್ತಪಡಿಸಿದ್ದರು. ಅವರ ಆಸೆ ಹಾಗೂ ಕನಸಿನಂತೆ ಮೂವರು ಮಕ್ಕಳು ಇಡೀ ಗ್ರಾಮವನ್ನೇ ರಾಜ್ಯದ ಪ್ರಥಮ ದೇವಾಲಯಗಳ ಗ್ರಾಮವಾಗಿ ಮಾರ್ಪಡಿಸಿದ್ದಾರೆ. ತ್ರೀಕಾಲದಲ್ಲಿಯೂ ಪೂಜಾ ಕೈಂಕರ್ಯಗಳು ನಡೆಯುವಂತೆ ಮಾಡಿದ್ದಾರೆ.

೨೦೦೬ ರಲ್ಲಿ ತನ್ನ ತಾಯಿಯ ಹೆಸರಿನ ಸುಸ್ಸಜ್ಜಿತ ಸಮುದಾಯ ಭವನ ನಿರ್ಮಾಣದ ಜೊತೆಗೆ ಆರಂಭವಾದ ಇವರುಗಳ ಧಾರ್ಮಿಕ ಸೇವೆ ಇದೀಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ೨೦೧೩ ರಲ್ಲಿ ಆಂಜನೇಯಸ್ವಾಮಿ ದೇವಾಲಯ ನಿರ್ಮಿಸಿದರು. ನಂತರ ಪ್ರತಿಯೊಬ್ಬ ದೈವಾರಾಧಕನಿಗೂ ತನ್ನ ಇಷ್ಟದೇವರ ಪೂಜೆ ಒಪ್ಪುವಂತಹ ಸ್ಥಳ ನಿರ್ಮಾಣದ ಮಾಡಬೇಕು ಎನ್ನುವ ಆಲೋಚನೆ ಮೂಡಿ ೨೨ ದೇವರುಗಳ ದೇವಾಲಯದ ಕಾರ್ಯಕ್ಕೆ ೨೦೧೫ರಲ್ಲಿ ಅಡಿಗಲ್ಲು ಹಾಕಿದರು. ಅದರ ಪರಿಣಾಮ ನಿರ್ಮಾಣವಾಗಿರುವುದೇ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯ.

ದೇವಾಲಯದ ವಿಶೇಷ

ಸುಮಾರು ೨ ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಸಮ್ಮುಚ್ಛಯದಲ್ಲಿ, ಲಕ್ಷ್ಮೀವೆಂಕಟೇಶ್ವರ ದೇವಾಲಯವೇ ೧೦೦/೫೦ ಅಡಿ ವಿಸ್ತೀರ್ಣವನ್ನು ಹೊಂದಿದೆ. ಜೊತೆಗೆ ಪಕ್ಕದಲ್ಲಿಯೇ ಮತ್ತೊಂದು ಸಮುದಾಯ ಭವನವಿದ್ದು ಕಲ್ಯಾಣ ಕಾರ್ಯಗಳ ಜೊತೆಗೆ ಭಕ್ತರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ.

ಬೆಂಗಳೂರಿನ ಖ್ಯಾತ ಶಿಲ್ಪಿ ಶ್ರೀಯುತ ವೆಂಕಟರಮಣಭಟ್‌ರವರ ಕೈಯಲ್ಲಿ ಅರಳಿದ ಕೃಷ್ಣಶಿಲೆಯ 9 ಅಡಿ 3 ಅಂಗುಲ ಎತ್ತರದ ಶ್ರೀ ಲಕ್ಷ್ಮೀವೆಂಕಟೇಶ್ವರ ಈ ದೇವಾಲಯದ ಪ್ರಮುಖ ಅಕರ್ಷಣೆ. ಮಂದಸ್ಮಿತ ಅಭಯ ಅಸ್ತ ವೆಂಕಟೇಶ್ವರನ ದೇವರ ಜೊತೆಗೆ ಗಣಪತಿ, ಶಿವ ಪಾರ್ವತಿ ನಂದಿ, ರಾಮ ಲಕ್ಷ್ಮಣ ಸೀತೆ, ಆಂಜನೇಯ, ರಾಧಾಕೃಷ್ಣ, ಪದ್ಮಾವತಿ, ಸರಸ್ವತಿ, ಶಿರಡಿ ಶ್ರೀಸಾಯಿಬಾಬ,ಸತ್ಯನಾರಾಯಣ ಸ್ವಾಮಿ, ಶನಿ ಮಹಾತ್ಮ, ದುರ್ಗಾಪರಮೇಶ್ವರಿ, ಸುಬ್ರಹ್ಮಣ್ಯ ಸ್ವಾಮಿ, ಕಾಲಭೈರವ, ಸ್ವಾಮಿ, ಕುಬೇರ ಸ್ವಾಮಿ, ಹಾಗೂ ನವಗ್ರಹ ದೇವರುಗಳು ಮುಖ್ಯದೇವಾಲಯದಲ್ಲಿದೆ. ಹಾಗೆ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಜಿ ಯವರ ಪುಟ್ಟಳಿಯನ್ನು ಸ್ಥಾಪಿಸಲಾಗಿದೆ.